ಕನ್ನಡ ಸಂಘ (ಸಿಂಗಪುರ)ವು ಈ ಬಾರಿ ಎಲ್ಲರ ಅಚ್ಚು ಮೆಚ್ಚಿನ ಆಟವಾದ ಕ್ರಿಕೆಟ್ ಟೂರ್ನಮೆಂಟನ್ನು ಜುಲೈ 22ರಂದು ಕಲ್ಲಂಗ್ (Kallang)ನಲ್ಲಿರುವ The Cage ನಲ್ಲಿ 'ಸಿಂಗಾರ ಪ್ರೀಮಿಯರ್ ಲೀಗ್- 2023' ಶೀರ್ಷಿಕೆಯಡಿ ಅಯೋಜಿಸಲಾಗಿತ್ತು. ಮೊದಲ ಬಾರಿ ಏರ್ಪಡಿಸಿದ ಒಳಾಂಗಣ ಕ್ರಿಕೆಟ್ ಪ್ರೀಮಿಯರ್ ಲೀಗ್ ನ ನೋಂದಣಿಗೆ ಕೊಡಲಾಗಿದ್ದ ಸಮಯದಲ್ಲಿ ಸಿಂಗನ್ನಡಿಗರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರಕಿ ಹೆಚ್ಚು ಜನರು ನೋಂದಾಯಿಸಿದ್ದರು. ಸಂಘದ ಕಾರ್ಯಕಾರಿ ಸಮಿತಿಯ ಸಹಾಯಕ ಖಜಾಂಚಿಯಾದ ಸಮಂತ್ ಯಾದವ್ ಕೃಷ್ಣಮೂರ್ತಿ ರವರು ಈ ಪಂದ್ಯಾವಳಿಯ ಮುಖ್ಯ ಆಯೋಜನೆ ಮತ್ತು ಮೇಲುಸ್ತುವಾರಿ ವಹಿಸಿದ್ದರು. ಒಟ್ಟು 120 ಆಟಗಾರರನ್ನು ಅಂತಿಮವಾಗಿ ಆಯ್ಕೆ ಮಾಡಿದ್ದರು. ಈ ಬಾರಿ 24 ಮಹಿಳಾ ಆಟಗಾರರು ಭಾಗವಹಿಸಿದ್ದು ವಿಶೇಷ. 120 ಆಟಗಾರರನ್ನು 8 ಆಟಗಾರರನ್ನೊಳಗೊಂಡ 12 ಪುರುಷ ತಂಡ ಮತ್ತು 3 ಮಹಿಳಾ ತಂಡಗಳನ್ನು ಮಾಡಿ, ಪುರುಷರ ಎಂಟು ತಂಡಗಳನ್ನು ನಾಲ್ಕು A, B, C & D ಗುಂಪುಗಳನ್ನು ರಚಿಸಿ, 3 ಮಹಿಳಾ ತಂಡಗಳನ್ನು ಒಂದು ಗುಂಪಾಗಿ ಮಾಡಲಾಗಿತ್ತು. ತಂಡಗಳಿಗೆ ಕೃಷ್ಣ, ಕಬಿನಿ, ಕಪಿಲ, ಕುಮಾರಧಾರಾ, ಮಲಪ್ರಭಾ, ಘಟಪ್ರಭಾ, ಭೀಮ, ಕಾಳಿ, ಯಗಚಿ, ಅಘನಾಶಿನಿ, ತುಂಗಾ, ಭದ್ರಾ, ಶರಾವತಿ, ಹೇಮಾವತಿ ಹಾಗೂ ಕಾವೇರಿ ಎಂಬ ಕರ್ನಾಟಕದ ಮುಖ್ಯ ನದಿಗಳ ಹೆಸರನ್ನಿಡಲಾಯಿತು. ಪ್ರತಿ ತಂಡವು ತನ್ನ ಗುಂಪಿನ ಎರಡು ತಂಡಗಳ ಜೊತೆ ಲೀಗ್ ಹಂತದಲ್ಲಿ ಸೆಣಸಾಡಿದರು. ಲೀಗ್ ಪಂದ್ಯಗಳಲ್ಲಿ ಎಲ್ಲಾ ತಂಡಗಳು ತಮ್ಮ ಕ್ರಿಕೆಟ್ ಕೌಶಲ್ಯವನ್ನು ಪ್ರದರ್ಶಿಸಿ…. ನಾ ಮೇಲು ತಾ ಮೇಲು ಎಂದು ಸೆಣಸಾಡಿದರು. ರೋಮಾಂಚನಕಾರಿ ಲೀಗ್ ಪ್ರದರ್ಶನದ ನಂತರ Finalಗೆ ಪ್ರವೇಶಿಸಿದ್ದು ಕುಮಾರಧಾರಾ ಹಾಗು ಕೃಷ್ಣ ತಂಡಗಳು. ಮೊದಲು ಬ್ಯಾಟಿಂಗ್ ಮಾಡಿದ ಕುಮಾರಧಾರಾ ತಂಡದವರು ಅತ್ಯಂತ ಪರಿಣಾಮಕಾರಿ ಹಾಗು ಜಾಗರೂಕತೆಯಿಂದ ಆಡಿ 90 ರನ್ ಸೆಟ್ ಮಾಡಿದರು. ಗೆಲ್ಲಲು 91 ರನ್ ಗಳನು ಬೆನ್ನು ಹತ್ತಿದ ಕೃಷ್ಣ ತಂಡವು ತಮ್ಮ ಕ್ರಿಕೆಟ್ ಕೌಶಲ್ಯತೆಯನ್ನು ಉತ್ತಮವಾಗಿ ಪ್ರದರ್ಶಿಸುತ್ತ ಗೆಲ್ಲಲು ಬಲವಾದ ಪ್ರಯತ್ನವನ್ನು ಮಾಡಿದರು. ಆದರೆ, ಕೇವಲ 31 ರನ್ ಗಳನ್ನು ಜೋಡಿಸಲು ಮಾತ್ರ ಸಾಧ್ಯವಾಯಿತು. ಕುಮಾರಧಾರಾ ತನ್ನ ಅತ್ಯುತ್ತಮ ಆಟವನ್ನು ಪ್ರದರ್ಶಿಸಿ “ಸಿಂಗಾರ ಪ್ರೀಮಿಯರ್ ಲೀಗ್- 2023” ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಈ ಬದಿಯಲಿ Kallangನ Cage 3 ಮೈದಾನದಲ್ಲಿ "ನಾವು ಯಾರಿಗೂ ಕಮ್ಮಿ ಇಲ್ಲ .. ನಮ್ಮ ತಂಡ ಅಂದ್ರೆ ಸುಮ್ನೆ ಅಲ್ಲ" ಅಂತ 3 ಮಹಿಳಾ ತಂಡಗಳು ಲೀಗ್ ಪಂದ್ಯಗಳನ್ನು ಆಡಿದವು, Best of 3 ಆಧಾರಿತ ತುಲನೆಯ ನಂತರ “ಶರಾವತಿ” ತಂಡವು ಅತಿಹೆಚ್ಚು ಅಂಕಗಳನ್ನುಗಳಿಸಿ ವಿಜಯಶಾಲಿಯಾಗಿ ಹೊರಹೊಮ್ಮಿತು. ನಾವು ಬದುಕೋ ಪ್ರತಿ ಕ್ಷಣಗಳು ಕ್ಷಣಾರ್ಧದಲ್ಲಿ ನೆನಪುಗಳಾತ್ತವೆ. ಈ ಪಂದ್ಯಾವಳಿಯ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ ಅಮೃತ ಭಟ್, ಭರತ್ ಹಾಗೂ ಬೈಟು ಸ್ಟುಡಿಯೋಗೆ ಅಭಿನಂದನೆಗಳು. ಯಶಸ್ವಿಯಾಗಿ ಈ ಪಂದ್ಯಾವಳಿಯನ್ನು ನಡೆಸಲು ಕಾರಣರಾದ ಎಲ್ಲ ಸ್ವಯಂಸೇವಕರಿಗೆ ಅಭಿನಂದನೆಗಳು ಹಾಗೂ ಕನ್ನಡಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ನಿಸ್ವಾರ್ಥ ಸೇವೆಗೆ ಧನ್ಯವಾದಗಳು.